Article by kathyayini – Prajavani – 2.9.14

ಬ್ರೆಜಿಲ್‌ನಲ್ಲಿ ಬಡ ಕುಟುಂಬಗಳಿಗೆ ನೀಡುವ ‘ಬೊಲ್ಸಾ ಫ್ಯಾಮಿಲಿಯ’ ಹಣ ವರ್ಗಾವಣೆ ಯೋಜನೆ ಮತ್ತು ಪಶ್ಚಿಮ ಬಂಗಾ­ಳದ ‘ಕನ್ಯಾಶ್ರೀ ಪ್ರಕಲ್ಪ’ ಯೋಜನೆಯಿಂದ, ಆರ್ಥಿಕವಾಗಿ ಹಿಂದುಳಿದ ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಯಶೋಗಾಥೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಅದೇ ರೀತಿ ಕರ್ನಾಟಕ ಹೈಕೋರ್ಟ್‌, ಶಾಲೆ­ಯಿಂದ ಹೊರಗುಳಿದ ಮಕ್ಕಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ
ಮೊಕ­ದ್ದಮೆಯಲ್ಲಿ, ಸದ್ಯ ಜಾರಿಯಲ್ಲಿರುವ ಶಿಷ್ಯ­ವೇತನಗಳನ್ನು ಆರ್ಥಿಕವಾಗಿ ದುರ್ಬಲರಾಗಿರುವ ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಅವರು ಶಾಲೆಯಿಂದ ಹೊರಗುಳಿಯ­ದಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯ­ಪಟ್ಟಿದೆ. ಆದರೆ, ಅತ್ಯಲ್ಪ ಮೊತ್ತದ ಈ ಶಿಷ್ಯ­ವೇತನಗಳು ಕುಟುಂಬದ ಒಟ್ಟು ಆದಾಯ, ಜಾತಿ, ಧರ್ಮ ಮತ್ತು ಲಿಂಗದ ಆಧಾರದ ಮೇಲೆ ವಿಭಿನ್ನ ರೀತಿಯ ಅರ್ಹತಾ ಮಾನದಂಡಗಳನ್ನು ಹೊಂದಿವೆ.

ಎಲ್ಲ ಮಕ್ಕಳೂ ಒಂದು ವರ್ಗದವ­ರಾಗಿ ಸಮಾನರಾಗಿರುವುದರಿಂದ ಅವರ ನಡುವೆ ನ್ಯಾಯ ಹಾಗೂ ಸಮಾನತೆ ಕಾಯ್ದು
ಕೊಳ್ಳು­ವುದಕ್ಕೆ ಪೂರಕವಾಗಿ ಈ ಶಿಷ್ಯ ವೇತನ­ಗಳನ್ನು ಸಮನ್ವಯಗೊಳಿಸಬೇಕಾದ ಹಾಗೂ ಸಮೀಕರಿಸ­ಬೇಕಾದ ಅಗತ್ಯ ಇದೆ.
ಉದಾಹರ­ಣೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ‘ಭಾಗ್ಯಲಕ್ಷ್ಮಿ’ ಯೋಜನೆಯ ಫಲಾನುಭ­ವಿ­ಗಳಾಗಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀಡುವ ಬಡತನ ರೇಖೆಗಿಂತ ಕೆಳಗಿ­ನವರ (ಬಿಪಿಎಲ್‌) ಪಡಿತರ ಕಾರ್ಡ್‌ ಹೊಂದಿ­ರ­ಬೇಕು ಅಥವಾ ನಗರ ಮತ್ತು ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯದ ಮಿತಿ ಕ್ರಮವಾಗಿ ₨೧೭,೦೦೦ ಮತ್ತು ₨೧೧,೦೦೦ ಇರಬೇಕು.

ಇದೇ ವೇಳೆ, ಇಲಾಖೆಯು ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ನೀಡುವ ಹಾಜರಾತಿ ಶಿಷ್ಯವೇತನ ಪಡೆಯಲು ಕುಟುಂಬದ ಒಟ್ಟು ವಾರ್ಷಿಕ ಆದಾಯದ ಮಿತಿಯನ್ನು ₨೧೦,೦೦೦ಕ್ಕೆ ನಿಗದಿಪಡಿಸಲಾಗಿದೆ. ಆದರೆ, ಶಿಕ್ಷಣ ಇಲಾಖೆಯು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲ ಬಾಲಕಿಯರೂ ಪಡೆಯ­ಬಹುದಾದ ಹಾಜರಾತಿ ಶಿಷ್ಯವೇತನಕ್ಕೆ ಕುಟುಂಬದ ಆದಾಯವನ್ನು ಮಾನದಂಡವಾಗಿ ಪರಿ­ಗಣಿಸುವುದೇ ಇಲ್ಲ.

ಪರಿಶಿಷ್ಟ ಜಾತಿಯವರು, ಆದಿವಾಸಿಗಳು ಮತ್ತು ನೈರ್ಮಲ್ಯರಹಿತ ಕೆಲಸ­ಗಳಲ್ಲಿ ಕಾರ್ಯ ನಿರ್ವಹಿಸುವ ಪರಿಶಿಷ್ಟ ಜಾತಿ­ಯವರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ವಾರ್ಷಿಕ ಆದಾಯದ ಮಿತಿ­ಯನ್ನು ₨ ೨ ಲಕ್ಷಕ್ಕೆ ನಿಗದಿಪಡಿಸಿದೆ. ಇನ್ನುಳಿ­ದಂತೆ ಅಲ್ಪಸಂಖ್ಯಾತರ ಇಲಾಖೆ ₨ ೧ ಲಕ್ಷ, ಹಿಂದುಳಿದ ವರ್ಗಗಳ ಇಲಾಖೆ ₨ ೪೪,೫೦೦ ಮತ್ತು ಕೇಂದ್ರ ಕಾರ್ಮಿಕರ ಕಲ್ಯಾಣ ಕಾಯ್ದೆ ಪ್ರಕಾರ ₨ ೧೦,೦೦೦ ವನ್ನು ಕುಟುಂಬದ ವಾರ್ಷಿಕ ಆದಾಯದ ಮಿತಿಯಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಹಾಗೆಯೇ ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿಯು ಆದಾಯದ ಮಿತಿಯನ್ನು ಮಾಸಿಕ ₨ ೧೦,೦೦೦ಕ್ಕೆ ನಿಗದಿ­ಪಡಿ­ಸಿದೆ. ದುರ್ಬಲ ವರ್ಗಗಳ ಮಕ್ಕಳ ನಡುವೆ ತಾರ­ತಮ್ಯ ಮೂಡಿಸಲು ಈ ಬಗೆಯ ಮಾನದಂಡ­ಗಳು ಕಾರಣವಾಗುತ್ತಿವೆ. ಇಂತಹ ಜಟಿಲ ಮಾನ­­ದಂಡಗಳ ಜೊತೆಗೆ ಬಹುತೇಕ ಶಿಷ್ಯವೇತನ­ಗಳ ಮೊತ್ತ ಅತ್ಯಲ್ಪ ಆಗಿರುವುದರಿಂದ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳಬೇಕೆಂಬ ಉದ್ದೇಶ ನಿರೀಕ್ಷೆಯಷ್ಟು ಪರಿಣಾಮಕಾರಿಯಾಗಿಲ್ಲ.

ಉದಾ­ಹರಣೆಗೆ, ವರ್ಷಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಮಕ್ಕಳಿಗೆ ₨ ೨೫೦ರಿಂದ ₨ ೭೫೦, ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವ ಶಾಲಾ ಹಾಜರಾತಿ ಭತ್ಯೆ ₨ ೨೫೦ರಿಂದ ₨೫೦೦, ಶಿಕ್ಷಣ ಇಲಾಖೆಯು ಎಲ್ಲಾ ಬಾಲಕಿಯ­ರಿಗೂ ನೀಡುವ ಹಾಜರಾತಿ ಭತ್ಯೆ ₨ ೫೨೦, ಭಾಗ್ಯ­ಲಕ್ಷ್ಮಿ ಯೋಜನೆ ಅಡಿ ಬಿಪಿಎಲ್‌ ಕುಟುಂಬದ ಎಲ್ಲ ಹೆಣ್ಣು ಮಕ್ಕಳಿಗೆ ₨ ೩೦೦ ರಿಂದ ₨ ೮೦೦, ಇತರ ಹಿಂದುಳಿದ ವರ್ಗದವರಿಗೆ (ಒಬಿಸಿ) ₨ ೨೫೦ ರಿಂದ ₨ ೪೦೦, ಅಂಗವಿಕಲರಿಗೆ ₨ ೫೦೦­ರಿಂದ ₨ ೧,೦೦೦, ಅಲ್ಪಸಂಖ್ಯಾತರಿಗೆ ₨ ೧೦೦೦, ಕಟ್ಟಡ ಕಾರ್ಮಿಕರ ಮಕ್ಕಳಿಗೆ ₨ ೨,೦೦೦
ನೀಡ­ಲಾಗುತ್ತಿದೆ. ಈ ರೀತಿಯ ಬಗೆಬಗೆಯ ಯೋಜನೆಗಳು, ಸಮಾನವಾಗಿ ಹಿಂದುಳಿದಿರುವ ಮಕ್ಕಳ ಮಧ್ಯೆ ಅಸಮಾನತೆಗೆ ಎಡೆಮಾಡಿವೆ.

ಆಗಾಗ್ಗೆ ಶಿಷ್ಯವೇತನಗಳ ಮೇಲೆ ವಿಧಿಸುವ ಸಂಖ್ಯಾ ಮಿತಿಯಿಂದಾಗಿ ಕೆಲವೊಮ್ಮೆ ಅರ್ಹ ಮಕ್ಕಳಿಗೂ ಅದನ್ನು ಪಡೆಯಲು ಸಾಧ್ಯವಾಗು
ವು­ದಿಲ್ಲ. ಹೀಗಾಗಿ, ಉದಾಹರಣೆಗೆ ಅಲ್ಪಸಂಖ್ಯಾ­ತರ ಶಿಷ್ಯವೇತನ ಪಡೆಯಲು ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು
₨ ೧ ಲಕ್ಷ ಎಂದು ನಿಗದಿ­ಪಡಿಸಿದ್ದರೂ ವಾಸ್ತವದಲ್ಲಿ ₨ ೮,೦೦೦­ದಿಂದ ₨ ೧೦,೦೦0ದ ಒಳಗಿನ ವರಮಾನದ ಮಿತಿಗೇ ಅದು ಒಳಪಟ್ಟಿದೆ. ಇದರಿಂದಾಗಿ ೨೦,೯೭,೪೪೧ ಅರ್ಜಿದಾರರ ಪೈಕಿ ಕೇವಲ ೧೧,೨೮,೮೪೧ ಮಂದಿ ಶಿಷ್ಯವೇತನಕ್ಕೆ ಅರ್ಹರಾಗಿ­ದ್ದಾರೆ.

ಹೀಗೆ ದುರ್ಬಲರ ನಡುವೆ ಅಸಮಾನತೆ ಸೃಷ್ಟಿಸುವ ಈ ಕ್ರಮವನ್ನು, ಆ್ಯಡಂ ಬಿ. ಚಕಿ ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಗುಜರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ್ದಾರೆ. ಸರ್ಕಾರ ಕೆಲವರಿಗೆ ಮಾತ್ರ ಕೆಲವು ನಿರ್ದಿಷ್ಟ ಸೌಲಭ್ಯಗಳನ್ನು ಒದಗಿಸಿ, ಅದೇ ಬಗೆಯ ಸೌಲ­ಭ್ಯದ ಅಗತ್ಯ ಇರುವ ಇತರರಿಗೆ ಅದು ಸಿಗುವು­ದಿಲ್ಲ ಎಂದಾದರೆ, ಈ ಕ್ರಮ ತಾರತಮ್ಯಕ್ಕೆ ಆಸ್ಪದ ಮಾಡಿಕೊಡುತ್ತದೆ. ಸಂವಿಧಾನದ ಪ್ರಕಾರ ‘ಸಮಾನರ ಮಧ್ಯೆ ಯಾವುದೇ ಕಾರಣಕ್ಕೂ ಅಸಮಾನತೆ ತೋರಬಾರದು’ ಮತ್ತು ‘ಎಲ್ಲ ಬಗೆಯ ಅವಕಾಶ ವಂಚಿತರನ್ನು ಸಮಾನರಾ­ಗಿಯೇ ನೋಡಬೇಕು’ ಎಂದು ಅಭಿಪ್ರಾಯ­ಪಟ್ಟಿದ್ದಾರೆ.

ದುರ್ಬಲ ವರ್ಗದ ಎಲ್ಲ ಮಕ್ಕಳನ್ನೂ ಸರಿಸಮ ಎಂದು ಪರಿಗಣಿಸುವುದಾದರೆ ಏಕರೂಪದ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರು­ವುದು ಸೂಕ್ತ. ‘ಅನನುಕೂಲ ಇರುವ ವರ್ಗಕ್ಕೆ ಸೇರಿದ ಮಕ್ಕಳು’ ಮತ್ತು ‘ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳು’ ಎಂಬ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಇ) ವ್ಯಾಖ್ಯಾನಕ್ಕೆ ಕೆಲ ತಿದ್ದುಪಡಿಗಳನ್ನು ಮಾಡಿಕೊಳ್ಳುವ ಮೂಲಕ ಇದಕ್ಕೆ ಬೇಕಾಗುವ ಮಾನದಂಡವನ್ನು ನಿಗದಿ ಪಡಿಸಬೇಕು. ಈ ಮೂಲಕ ಈ ಮಾನದಂಡಗಳು ಎಲ್ಲ ಅರ್ಹ ಮಕ್ಕಳಿಗೂ ಅನ್ವಯವಾಗುವಂತೆ ಇರಬೇಕೇ ಹೊರತು ಕೆಲವೇ ಮಕ್ಕಳಿಗೆ ಅಲ್ಲ.

ಪ್ರತಿ ವರ್ಷ ಬಾಲಕ ಮತ್ತು ಬಾಲಕಿಯ­ರಿ­ಬ್ಬರಿಗೂ ಕನಿಷ್ಠ ₨೧,೨೦೦ ಶಿಷ್ಯವೇತನವನ್ನು ನಿಗದಿಪಡಿಸಬಹುದು. ಇದರ ಜೊತೆಗೆ ₨೧೦,೦೦೦ದ ಬಾಂಡ್‌ ಮಾಡಿಸಬಹುದು. ಇದು ಮಕ್ಕಳು ೧೪ ಅಥವಾ ೧೮ನೇ ವರ್ಷಕ್ಕೆ ಕಾಲಿಟ್ಟಾಗ ಭಾಗ್ಯಲಕ್ಷ್ಮಿ ಯೋಜನೆಯ ಮಾದರಿ­ಯಲ್ಲೇ ₨೧ ಲಕ್ಷ ಆಗಬೇಕು. ಇದನ್ನು ಪಡೆ­ಯಲು ಮಗು ಕಡ್ಡಾಯವಾಗಿ 8 ವರ್ಷ ಶಾಲೆ­ಯಲ್ಲಿ ಓದಿರಬೇಕೆಂಬ ಷರತ್ತನ್ನು ವಿಧಿಸ
ಬ­ಹುದು. ಜೊತೆಗೆ ಎಲ್ಲ ಇಲಾಖೆಗಳು ನೀಡುವ ಶಿಷ್ಯವೇತನಕ್ಕೆ ಒಂದೇ ನಿಧಿ ಸ್ಥಾಪಿಸಿ ಹಣವನ್ನು ಎಲ್ಲ ದುರ್ಬಲ ಮಕ್ಕಳಿಗೂ ಸಮನಾಗಿ ವಿತರಿಸ­ಬಹುದು.

Year:
September 2014
Author:
Kathyayini Chamaraj

file attach: