ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯಡಿ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾದ ರಾಜೀವ್ ಗಾಂಧಿ ನಗರದ ಮಂಜುಳ……

ಮಂಜುಳಾರವರು ರಾಜೀವ್ ಗಾಂಧಿ ನಗರ ಪ್ರದೇಶದಲ್ಲಿ(ಕೆ.ಆರ್.ಪುರಂ, ಬೆಂಗಳೂರು) ವಾಸವಾಗಿದ್ದು, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾಗಿದ್ದಾರೆ. ಈ ಪ್ರದೇಶದಲ್ಲಿರುವ ಯಾವ ಬಡಕುಟುಂಬಕ್ಕೂ 2009ರವರೆಗೂ ಈ ಯೋಜನೆಯ ಸಂಪೂರ್ಣ ಮಾಹಿತಿ ಗೊತ್ತಿರಲಿಲ್ಲ ಮತ್ತು ಈ ಯೋಜನೆಯ ಸೌಲಭ್ಯವನ್ನು ಪಡೆದ ಫಲಾನುಭವಿಗಳೇ ಇರಲಿಲ್ಲ.ಆ ನಂತರ…..?
ಆ ಸಮಯದಲ್ಲಿ ಸಿವಿಕ್ ಬೆಂಗಳೂರು ಸಂಸ್ಥೆಯು 2009ರಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿ ಎಲ್ಲಾ ಬಡಜನರನ್ನು ಒಟ್ಟುಗೂಡಿಸಿ ಯೋಜನೆಯಡಿ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಈ ಯೋಜನೆಯ ಬಗ್ಗೆ ಮಾಹಿತಿ ಪಡೆದ ಮಂಜುಳಾರವರು 2010 ಜೂನ್ ತಿಂಗಳಿನಲ್ಲಿ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಸಾಲ ಮತ್ತು ಸಹಾಯಧನ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸವುದಕ್ಕೆ ಅರ್ಜಿ ಸಲ್ಲಿಸಿದ್ದರು.

ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದ ಪರಿಚಯ:
ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯ ಈ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ನಗರದ ಬಡಜನರು ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಗರಿಷ್ಠ ಯೋಜನಾ ವೆಚ್ಚ ರೂ. 2 ಲಕ್ಷ ಆಗಿದ್ದು, ಇದರಲ್ಲಿ ಶೇ. 25% ರಷ್ಟು ಗರಿಷ್ಠ ಸಹಾಯಧನ(ಅಂದರೆ ರೂ.50,000), ಶೇ.5% ರಷ್ಟು ಫಲಾನುಭವಿಯ ವಂತಿಗೆ(ರೂ 10,000) ಹಾಗೂ ಉಳಿದದ್ದು ಬ್ಯಾಂಕಿನ ಸಾಲ (ರೂ. 14,0000)ವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ಫಲಾನುಭವಿಯು ಯೋಜಿಸಿದ ಯಾವುದೇ ಉದ್ಯೋಗವನ್ನು ಕೈಗೊಳ್ಳಲು ಅವಕಾಶವಿದೆ. ಹಾಗಾಗಿ ಮಂಜುಳಾರವರು ರೂ. 1ಲಕ್ಷ ಯೋಜನಾ ವೆಚ್ಚದಲ್ಲಿ ಬಟ್ಟೆ ವ್ಯಾಪಾರವನ್ನು ಮಾಡಲು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದರು.

ಬಿಡುಗಡೆಯಾದ ಸಾಲ ಮತ್ತು ಸಹಾಯಧನ:
ಇವರ ನಿರೀಕ್ಷೆಯಂತೆಯೇ ಬಟ್ಟೆ ವ್ಯಾಪಾರಕ್ಕೆಂದು ರೂ. 1 ಲಕ್ಷ ಸಾಲ ಮತ್ತು ಸಹಾಯಧನ ಬಿಡುಗಡೆಯಾಗಿದೆ.
(ಸಾಲ-70000 ರೂ, ಸಹಾಯಧನ-25000 ರೂ, ಫಲಾನುಭವಿಯ ವಂತಿಗೆ-5000 ರೂ.) ಈಗ ಇವರ ನಿವಾಸದಲ್ಲೇ ಸೀರೆ, ರವಿಕೆ, ಚೂಡಿದಾರ್ ಇತರ ವಿವಿಧ ರೀತಿಯ ಬಟ್ಟೆಗಳ ವ್ಯಾಪಾರವನ್ನು ಮಾಡುತ್ತಿದ್ದಾರೆ.