ಮಹದೇವಪುರ ಬಿ.ಬಿ.ಎಂ.ಪಿ ವಲಯದಲ್ಲಿ ಚೇತರಸಿಕೊಂಡ ಎಸ್.ಜೆ.ಎಸ್.ಆರ್.ವೈ.

2009-10ರ ಅವಧಿಯಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯು ಪರಿಷ್ಕೃತವಾಗಿ ಬಂದ ನಂತರ ಈ ಯೋಜನೆಯ ಅನುಷ್ಠಾನ ಬಿ.ಬಿ.ಎಂ.ಪಿಯಲ್ಲಿ ಬಹಳ ಹಿಂದುಳಿದಿತ್ತು. ಉದಾ: ಒಟ್ಟಾರೆ ಬಿ.ಬಿ.ಎಂ.ಪಿಯಲ್ಲಿ 2009-10 ಮತ್ತು 2010-11 ರ ಅವಧಿಯಲ್ಲಿ ಕ್ರಮವಾಗಿ ಶೇಕಡಾ 14% ಮತ್ತು 44% ಮಾತ್ರ ಪ್ರಗತಿಯಾಗಿತ್ತು. ಇದಕ್ಕೆ ಸಿವಿಕ್ ಸಂಸ್ಥೆಯು ಬಿ.ಬಿ.ಎಂ.ಪಿ ಯಲ್ಲಿ ಅಧ್ಯಯನ ಕೈಗೊಂಡಾಗ ಹಲವಾರು ಸಮಸ್ಯೆಗಳು ಕಂಡುಬಂದವು. (ಈ ಸಮಸ್ಯೆಗಳ ಪಟ್ಟಿಯನ್ನು ಈ

http://civiconsjsry.blogspot.in/2012/09/blog-post.html ಲಿಂಕ್ ನಲ್ಲಿ ನೀಡಲಾಗಿದೆ).

ಈ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಎಸ್.ಜೆ.ಎಸ್.ಆರ್.ವೈ ಯೋಜನೆಯಡಿ ರಚನೆಯಾಗಿರುವ ನೆರೆಹೊರೆ ಗುಂಪು, ನೆರೆಹೊರೆ ಸಮಿತಿ ಮತ್ತು ಸಮುದಾಯ ಅಭಿವೃದ್ಧಿ ಸಂಘಗಳ ಸದಸ್ಯರ ಜೊತೆ ಕಾರ್ಯ ನಿರ್ವಹಿಸಿ ಸಮಸ್ಯೆಗಳನ್ನು ಪರಿಹರಿಸಲು ಸಿವಿಕ್ ಸಂಸ್ಥೆಯು ನಿರ್ಧರಿಸಿತು. ಅದರಂತೆ ಬಿ.ಬಿ.ಎಂ.ಪಿ ಎಲ್ಲಾ ವಲಯಗಳಲ್ಲಿ ಅಭಿಯಾನವನ್ನು ಆರಂಭಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮತ್ತು ಕುಂದುಕೊರತೆಗಳ ಅಹವಾಲು ಕಾರ್ಯಕ್ರಮಗಳನ್ನು ಜಂಟಿ ಆಯುಕ್ತರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಬಿ.ಬಿ.ಎಂ.ಪಿ ಮಹದೇವಪುರ ವಲಯದಲ್ಲಿಯೂ ತನ್ನ ಅಭಿಯಾನ ಮುಂದುವರೆಸಿ ಇಲ್ಲಿನ ಸಮುದಾಯ ಅಭಿವೃದ್ಧಿ ಸಂಘದ ಸದಸ್ಯತ್ವವನ್ನೂ ಪಡೆದು ಜನರು ಎದುರಿಸುತ್ತಿದ್ದ ಸಮಸ್ಯೆಗಳು ಪರಿಹಾರವಾಗಲು ವೇದಿಕೆಯಾಗಿ ಕಾರ್ಯ ನಿರ್ವಹಿಸಿತು.

ಮಹದೇವಪುರ ಬಿ.ಬಿ.ಎಂ.ಪಿಯಲ್ಲಿ ಆದ ಕೆಲವು ಬದಲಾವಣೆಗಳು:

  1.  ಸಿ.ಡಿ.ಎಸ್. ಸಭೆಯು ಪ್ರತಿ ತಿಂಗಳೂ ನಡೆಯಬೇಕಿತ್ತು. ಆದರೆ ವರ್ಷಕ್ಕೆ ಒಂದು ಬಾರಿ ಯಾಗುತ್ತಿದ್ದ ಸಿ.ಡಿ.ಎಸ್. ಸಭೆಯು 3 ತಿಂಗಳಿಗೊಮ್ಮೆ ನಡೆಯುತ್ತಿದೆ.
  2.  ಉತ್ತಮ ರೀತಿಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿದ್ದಾರೆ. ಈ ಮೊದಲು ಕ್ರಿಯಾ ಯೋಜನೆಯು ಸರಿಯಾದ ರೀತಿಯಲ್ಲಿರಲಿಲ್ಲ.
  3.  ಅರ್ಜಿ ಹಾಕಿ ಒಂದು ವರ್ಷವಾದರೂ ಸಹ ಸಾಲ ಮತ್ತು ಸಹಾಯಧನ ಬಿಡುಗಡೆಯಾಗುತ್ತಿರಲಿಲ್ಲ. ಆದರೆ ಈಗ ಅರ್ಜಿ ಹಾಕಿದ 3 ತಿಂಗಳುಗಳಲ್ಲಿಯೇ  ಬಿಡುಗಡೆಯಾಗುತ್ತಿದೆ.
  4.  ಈ ಮೊದಲು ಅಧಿಕಾರಿಗಳು ಸಾಲ ಬಿಡುಗಡೆಗಾಗಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಪ್ರತಿನಿತ್ಯ ಸಂಪರ್ಕ ಮಾಡುತ್ತಿರಲಿಲ್ಲ. ಆದರೆ ಈಗ ಇಲಾಖಾ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕಿಸಿ ಸಾಲ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿದ್ದಾರೆ.
  5.  ಬಿಡುಗಡೆಯಾದ ಹಣ ಈ ಮೊದಲು ಖರ್ಚಾಗುತ್ತಿರಲಿಲ್ಲ. ಆದರೆ ಈಗ ಉತ್ತಮ ರೀತಿಯಲ್ಲಿ ಪ್ರಗತಿಯಾಗುತ್ತಿದೆ.

ಮಹದೇವಪುರ ವಲಯ ವ್ಯಾಪ್ತಿಯ ದೇವಸಂದ್ರ ವಾರ್ಡ್ ನ ರಾಜೀವ್ ಗಾಂಧಿನಗರ ಪ್ರದೇಶದಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಯಶೋಗಾಥೆಗಳು :
ರಾಜೀವ್ಗಾಂಧಿನಗರ ಪ್ರದೇಶದ ಜನರಿಗೆ ಸಿವಿಕ್ ಸಂಸ್ಥೆಯು ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಸಂಪೂರ್ಣವಾಗಿ ಅರಿವು ಮೂಡಿಸಿದ ಮೇಲೆ ಅಲ್ಲಿನ ಜನರು ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿ ಮಾರ್ಗಸೂಚಿಯ  ಪ್ರಕಾರವೇ ಸಾಲ ಮತ್ತು ಸಹಾಯಧನದ ಮಂಜೂರಾತಿಯನ್ನು ಪಡೆದಿದ್ದಾರೆ.

ಪುಷ್ಟಲತರ ಯಶೋಗಾಥೆ:
ಪುಷ್ಟಲತ ರವರು ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆದ ಮೇಲೆ ಇಲಾಖೆಯಿಂದ ಅರ್ಜಿ ಪಡೆದು 2009-10 ರ ಅವಧಿಯಲ್ಲಿ ಹೋಟೆಲ್ ಉದ್ಯಮಕ್ಕೆಂದು ಅರ್ಜಿ ಸಲ್ಲಿಸಿದರು. ಇವರ ಅರ್ಜಿಯನ್ನು ಸ್ವೀಕರಿಸಿದ ಅಧಿಕಾರಿಗಳು ಪರಿಶೀಲಿಸಿ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಸಾಲ ಬಿಡುಗಡೆಗಾಗಿ 3 ತಿಂಗಳ ನಂತರ ನೀಡಿದರು. ಆದರೆ ಬ್ಯಾಂಕ್ ಅಧಿಕಾರಿಗಳು ಪುಷ್ಪಲತರವರಿಗೆ ಟಾರ್ಗೆಟ್ ಮುಗಿದಿದೆ ಎಂದೂ ಮುಂದಿನ ವರ್ಷ ನೀಡುವುದಾಗಿಯೂ ಭರವಸೆ ನೀಡಿದರು. ಅಲ್ಲದೆ ಸಾಲ ಬಿಡುಗಡೆ ಮಾಡಬೇಕಾದರೆ ಸಾಲಕ್ಕೆ ಭದ್ರತೆ ಕೊಡಬೇಕಾಗುತ್ತದೆ ಎಂದೂ ಸಹ ಹೇಳಿದರು.

ಪುಷ್ಪಲತ ರವರು ಈ ಸಮಸ್ಯೆಗಳನ್ನು ಮಹದೇವಪುರ ವಲಯ ಜಂಟಿ ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳೂ ಸಹ ಪುನಃ ಹೊಸ ಅರ್ಜಿಯನ್ನು ಹಾಕಬೇಕೆಂದು ತಿಳಿಸಿದರು. ಆದರೆ ಈ ಎಲ್ಲಾ ಸಮಸ್ಯೆಗಳನ್ನೂ ಪುಷ್ಪಲತರವರು ಪ್ರತಿಯೊಂದು ಹಂತದಲ್ಲಿಯೂ ಪ್ರಶ್ನಿಸುತ್ತಾ ಬಂದರು.

ಪುಷ್ಪಲತರವರು ಇಟ್ಟ ದಿಟ್ಟ ಹೆಜ್ಜೆಗಳು :

  •  ಹೊಸ ಅರ್ಜಿಯನ್ನು ನೀಡಿ ಎಂದಾಗ ಪುಷ್ಪಲತರವರು ಹೊಸ ಅರ್ಜಿಯನ್ನು ಯಾಕೆ ನೀಡಬೇಕು? ಕೊಟ್ಟ ಅರ್ಜಿಯನ್ನು ಏನು ಮಾಡಿದ್ದೀರಿ? ಹೊಸ ಅರ್ಜಿಯನ್ನು ನೀಡುವುದಿಲ್ಲ ಎಂದು ಪ್ರಶ್ನೆ ಮಾಡಿ, ಈ ಮೊದಲು ನೀಡಿದ ಅರ್ಜಿಯನ್ನೇ ಈ ವರ್ಷವೂ ಪರಿಗಣಿಸಬೇಕೆಂದು ಒತ್ತಾಯಿಸಿದರು. ಅಧಿಕಾರಿಗಳು ಮೊದಲು ಇವರ ಮಾತನ್ನು ನಿರ್ಲಕ್ಷಿಸಿದರೂ ಇವರ ಪ್ರಶ್ನೆಗಳಿಗೆ ಉತ್ತರ ನೀಡಲು ಆಗದೆ ಈ ಮೊದಲು ನೀಡಿದ ಅರ್ಜಿಯನ್ನೇ ಪರಿಗಣಿಸಲು ನಿರ್ಧರಿಸಿದರು.
  •  ಇವರು ಪ್ರಶ್ನಿಸಿದ ಮೇಲೆ ಇದೇ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಹಲವಾರು ಜನರಿಗೂ ಸಹ ಹೊಸ ಅರ್ಜಿಯನ್ನು ನೀಡಲು ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
  •  ಸಾಲಕ್ಕೆ ಭಧ್ರತೆಯನ್ನು ಕೇಳಿದ ಬ್ಯಾಂಕ್ ಅಧಿಕಾರಿಗಳ ವಿರುಧ್ಧ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಮಟ್ಟದ ಬ್ಯಾಂಕುಗಳ ಸಮಿತಿಯ ಮುಖ್ಯಸ್ಥರನ್ನು ಭೇಟಿ ಮಾಡಿದರು. ಆ ನಂತರ ರಾಜ್ಯಮಟ್ಟದ ಬ್ಯಾಂಕುಗಳ ಸಮಿತಿಯ ಮುಖ್ಯಸ್ಥರು ಸಾಲಕ್ಕೆ ಭಧ್ರತೆಯನ್ನು ಕೇಳಬಾರದೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈಗ ಪುಷ್ಪಲತವರಿಗೆ ಸಾಲ ಮತ್ತು ಸಹಾಯಧನ ಸೇರಿ 1 ಲಕ್ಷ ರೂ. ಯಾವುದೇ ಭದ್ರೆತೆ ಇಲ್ಲದೆ ಬಿಡುಗಡೆ ಮಾಡಲಾಗಿದೆ.

 

 

ಇದೇ ರೀತಿಯಾಗಿ ರಾಜೀವ್ ಗಾಂಧಿನಗರದ ಮತ್ತಿಬ್ಬರು ಅರ್ಜಿ ಸಲ್ಲಿಸಿ ಸಾಲ ಮತ್ತು ಸಹಾಯಧನವನ್ನು ಪಡೆದಿದ್ದಾರೆ. ಇವರಲ್ಲಿ ಮಂಜುಳಾ ರವರು ಸೀರೆ ವ್ಯಾಪಾರಕ್ಕೆಂದು ಅರ್ಜಿ ಸಲ್ಲಿಸಿ 1 ಲಕ್ಷ ರೂ ಸಾಲ ಮತ್ತು ಸಹಾಯಧನವನ್ನು ಪಡೆದಿದ್ದಾರೆ. ಹಾಗೆಯೇ ಕುಮಾರ್ ಎಂಬುವವರು ಪೀಠೋಪಕರಣಗಳ ತಯಾರಿಕಾ ಉದ್ಯಮಕ್ಕೆ ಅರ್ಜಿ ಸಲ್ಲಿಸಿ 2 ಲಕ್ಷ ರೂ. ಸಾಲ ಮತ್ತು ಸಹಾಯಧನವನ್ನು ಪಡೆದಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಸಾಲಕ್ಕೆ ಭಧ್ರತೆಯನ್ನು ಕೇಳಿದರೂ ಸಹ ಮಾರ್ಗಸೂಚಿಯಲ್ಲಿ ತಿಳಿಸಿರುವ ಪ್ರಕಾರ ಈ ಯೋಜನೆಯಡಿಯಲ್ಲಿ ಪಡೆದ ಸಾಲಕ್ಕೆ ಭದ್ರತೆಯನ್ನು ನೀಡುವಂತಿಲ್ಲ ಎಂದು ಪ್ರಶ್ನಿಸಿ ತಮ್ಮ ಹಕ್ಕನ್ನು ಚಲಾಯಿಸಿ ಭದ್ರತೆಯನ್ನು ನೀಡದೆ ಸಾಲವನ್ನು ಪಡೆದಿದ್ದಾರೆ.