Article by kathyayini – Prajavani – 2.9.14
ಶಿಷ್ಯವೇತನ: ಸಮಾನರ ಮಧ್ಯೆ ಅಸಮಾನತೆ
ಕಾತ್ಯಾಯಿನಿ ಚಾಮರಾಜ್ ಬೆಂಗಳೂರು
ಬ್ರೆಜಿಲ್ನಲ್ಲಿ ಬಡ ಕುಟುಂಬಗಳಿಗೆ ನೀಡುವ ‘ಬೊಲ್ಸಾ ಫ್ಯಾಮಿಲಿಯ’ ಹಣ ವರ್ಗಾವಣೆ ಯೋಜನೆ ಮತ್ತು ಪಶ್ಚಿಮ ಬಂಗಾಳದ ‘ಕನ್ಯಾಶ್ರೀ ಪ್ರಕಲ್ಪ’ ಯೋಜನೆಯಿಂದ, ಆರ್ಥಿಕವಾಗಿ ಹಿಂದುಳಿದ ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಯಶೋಗಾಥೆ ಇತ್ತೀಚೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಅದೇ ರೀತಿ ಕರ್ನಾಟಕ ಹೈಕೋರ್ಟ್, ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ
ಮೊಕದ್ದಮೆಯಲ್ಲಿ, ಸದ್ಯ ಜಾರಿಯಲ್ಲಿರುವ ಶಿಷ್ಯವೇತನಗಳನ್ನು ಆರ್ಥಿಕವಾಗಿ ದುರ್ಬಲರಾಗಿರುವ ಮಕ್ಕಳಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಅವರು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಅತ್ಯಲ್ಪ ಮೊತ್ತದ ಈ ಶಿಷ್ಯವೇತನಗಳು ಕುಟುಂಬದ ಒಟ್ಟು ಆದಾಯ, ಜಾತಿ, ಧರ್ಮ ಮತ್ತು ಲಿಂಗದ ಆಧಾರದ ಮೇಲೆ ವಿಭಿನ್ನ ರೀತಿಯ ಅರ್ಹತಾ ಮಾನದಂಡಗಳನ್ನು ಹೊಂದಿವೆ.
ಎಲ್ಲ ಮಕ್ಕಳೂ ಒಂದು ವರ್ಗದವರಾಗಿ ಸಮಾನರಾಗಿರುವುದರಿಂದ ಅವರ ನಡುವೆ ನ್ಯಾಯ ಹಾಗೂ ಸಮಾನತೆ ಕಾಯ್ದು
ಕೊಳ್ಳುವುದಕ್ಕೆ ಪೂರಕವಾಗಿ ಈ ಶಿಷ್ಯ ವೇತನಗಳನ್ನು ಸಮನ್ವಯಗೊಳಿಸಬೇಕಾದ ಹಾಗೂ ಸಮೀಕರಿಸಬೇಕಾದ ಅಗತ್ಯ ಇದೆ.
ಉದಾಹರಣೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೀಡುವ ‘ಭಾಗ್ಯಲಕ್ಷ್ಮಿ’ ಯೋಜನೆಯ ಫಲಾನುಭವಿಗಳಾಗಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನೀಡುವ ಬಡತನ ರೇಖೆಗಿಂತ ಕೆಳಗಿನವರ (ಬಿಪಿಎಲ್) ಪಡಿತರ ಕಾರ್ಡ್ ಹೊಂದಿರಬೇಕು ಅಥವಾ ನಗರ ಮತ್ತು ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯದ ಮಿತಿ ಕ್ರಮವಾಗಿ ₨೧೭,೦೦೦ ಮತ್ತು ₨೧೧,೦೦೦ ಇರಬೇಕು.
ಇದೇ ವೇಳೆ, ಇಲಾಖೆಯು ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ನೀಡುವ ಹಾಜರಾತಿ ಶಿಷ್ಯವೇತನ ಪಡೆಯಲು ಕುಟುಂಬದ ಒಟ್ಟು ವಾರ್ಷಿಕ ಆದಾಯದ ಮಿತಿಯನ್ನು ₨೧೦,೦೦೦ಕ್ಕೆ ನಿಗದಿಪಡಿಸಲಾಗಿದೆ. ಆದರೆ, ಶಿಕ್ಷಣ ಇಲಾಖೆಯು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಎಲ್ಲ ಬಾಲಕಿಯರೂ ಪಡೆಯಬಹುದಾದ ಹಾಜರಾತಿ ಶಿಷ್ಯವೇತನಕ್ಕೆ ಕುಟುಂಬದ ಆದಾಯವನ್ನು ಮಾನದಂಡವಾಗಿ ಪರಿಗಣಿಸುವುದೇ ಇಲ್ಲ.
ಪರಿಶಿಷ್ಟ ಜಾತಿಯವರು, ಆದಿವಾಸಿಗಳು ಮತ್ತು ನೈರ್ಮಲ್ಯರಹಿತ ಕೆಲಸಗಳಲ್ಲಿ ಕಾರ್ಯ ನಿರ್ವಹಿಸುವ ಪರಿಶಿಷ್ಟ ಜಾತಿಯವರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ವಾರ್ಷಿಕ ಆದಾಯದ ಮಿತಿಯನ್ನು ₨ ೨ ಲಕ್ಷಕ್ಕೆ ನಿಗದಿಪಡಿಸಿದೆ. ಇನ್ನುಳಿದಂತೆ ಅಲ್ಪಸಂಖ್ಯಾತರ ಇಲಾಖೆ ₨ ೧ ಲಕ್ಷ, ಹಿಂದುಳಿದ ವರ್ಗಗಳ ಇಲಾಖೆ ₨ ೪೪,೫೦೦ ಮತ್ತು ಕೇಂದ್ರ ಕಾರ್ಮಿಕರ ಕಲ್ಯಾಣ ಕಾಯ್ದೆ ಪ್ರಕಾರ ₨ ೧೦,೦೦೦ ವನ್ನು ಕುಟುಂಬದ ವಾರ್ಷಿಕ ಆದಾಯದ ಮಿತಿಯಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.
ಹಾಗೆಯೇ ಕರ್ನಾಟಕ ಕಾರ್ಮಿಕರ ಕಲ್ಯಾಣ ಮಂಡಳಿಯು ಆದಾಯದ ಮಿತಿಯನ್ನು ಮಾಸಿಕ ₨ ೧೦,೦೦೦ಕ್ಕೆ ನಿಗದಿಪಡಿಸಿದೆ. ದುರ್ಬಲ ವರ್ಗಗಳ ಮಕ್ಕಳ ನಡುವೆ ತಾರತಮ್ಯ ಮೂಡಿಸಲು ಈ ಬಗೆಯ ಮಾನದಂಡಗಳು ಕಾರಣವಾಗುತ್ತಿವೆ. ಇಂತಹ ಜಟಿಲ ಮಾನದಂಡಗಳ ಜೊತೆಗೆ ಬಹುತೇಕ ಶಿಷ್ಯವೇತನಗಳ ಮೊತ್ತ ಅತ್ಯಲ್ಪ ಆಗಿರುವುದರಿಂದ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳಬೇಕೆಂಬ ಉದ್ದೇಶ ನಿರೀಕ್ಷೆಯಷ್ಟು ಪರಿಣಾಮಕಾರಿಯಾಗಿಲ್ಲ.
ಉದಾಹರಣೆಗೆ, ವರ್ಷಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆದಿವಾಸಿ ಮಕ್ಕಳಿಗೆ ₨ ೨೫೦ರಿಂದ ₨ ೭೫೦, ಗ್ರಾಮೀಣ ಪ್ರದೇಶದ ಬಾಲಕಿಯರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವ ಶಾಲಾ ಹಾಜರಾತಿ ಭತ್ಯೆ ₨ ೨೫೦ರಿಂದ ₨೫೦೦, ಶಿಕ್ಷಣ ಇಲಾಖೆಯು ಎಲ್ಲಾ ಬಾಲಕಿಯರಿಗೂ ನೀಡುವ ಹಾಜರಾತಿ ಭತ್ಯೆ ₨ ೫೨೦, ಭಾಗ್ಯಲಕ್ಷ್ಮಿ ಯೋಜನೆ ಅಡಿ ಬಿಪಿಎಲ್ ಕುಟುಂಬದ ಎಲ್ಲ ಹೆಣ್ಣು ಮಕ್ಕಳಿಗೆ ₨ ೩೦೦ ರಿಂದ ₨ ೮೦೦, ಇತರ ಹಿಂದುಳಿದ ವರ್ಗದವರಿಗೆ (ಒಬಿಸಿ) ₨ ೨೫೦ ರಿಂದ ₨ ೪೦೦, ಅಂಗವಿಕಲರಿಗೆ ₨ ೫೦೦ರಿಂದ ₨ ೧,೦೦೦, ಅಲ್ಪಸಂಖ್ಯಾತರಿಗೆ ₨ ೧೦೦೦, ಕಟ್ಟಡ ಕಾರ್ಮಿಕರ ಮಕ್ಕಳಿಗೆ ₨ ೨,೦೦೦
ನೀಡಲಾಗುತ್ತಿದೆ. ಈ ರೀತಿಯ ಬಗೆಬಗೆಯ ಯೋಜನೆಗಳು, ಸಮಾನವಾಗಿ ಹಿಂದುಳಿದಿರುವ ಮಕ್ಕಳ ಮಧ್ಯೆ ಅಸಮಾನತೆಗೆ ಎಡೆಮಾಡಿವೆ.
ಆಗಾಗ್ಗೆ ಶಿಷ್ಯವೇತನಗಳ ಮೇಲೆ ವಿಧಿಸುವ ಸಂಖ್ಯಾ ಮಿತಿಯಿಂದಾಗಿ ಕೆಲವೊಮ್ಮೆ ಅರ್ಹ ಮಕ್ಕಳಿಗೂ ಅದನ್ನು ಪಡೆಯಲು ಸಾಧ್ಯವಾಗು
ವುದಿಲ್ಲ. ಹೀಗಾಗಿ, ಉದಾಹರಣೆಗೆ ಅಲ್ಪಸಂಖ್ಯಾತರ ಶಿಷ್ಯವೇತನ ಪಡೆಯಲು ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು
₨ ೧ ಲಕ್ಷ ಎಂದು ನಿಗದಿಪಡಿಸಿದ್ದರೂ ವಾಸ್ತವದಲ್ಲಿ ₨ ೮,೦೦೦ದಿಂದ ₨ ೧೦,೦೦0ದ ಒಳಗಿನ ವರಮಾನದ ಮಿತಿಗೇ ಅದು ಒಳಪಟ್ಟಿದೆ. ಇದರಿಂದಾಗಿ ೨೦,೯೭,೪೪೧ ಅರ್ಜಿದಾರರ ಪೈಕಿ ಕೇವಲ ೧೧,೨೮,೮೪೧ ಮಂದಿ ಶಿಷ್ಯವೇತನಕ್ಕೆ ಅರ್ಹರಾಗಿದ್ದಾರೆ.
ಹೀಗೆ ದುರ್ಬಲರ ನಡುವೆ ಅಸಮಾನತೆ ಸೃಷ್ಟಿಸುವ ಈ ಕ್ರಮವನ್ನು, ಆ್ಯಡಂ ಬಿ. ಚಕಿ ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಗುಜರಾತ್ ಹೈಕೋರ್ಟ್ನ ವಿಭಾಗೀಯ ಪೀಠದ ಇಬ್ಬರು ನ್ಯಾಯಮೂರ್ತಿಗಳು ಪ್ರಸ್ತಾಪಿಸಿದ್ದಾರೆ. ಸರ್ಕಾರ ಕೆಲವರಿಗೆ ಮಾತ್ರ ಕೆಲವು ನಿರ್ದಿಷ್ಟ ಸೌಲಭ್ಯಗಳನ್ನು ಒದಗಿಸಿ, ಅದೇ ಬಗೆಯ ಸೌಲಭ್ಯದ ಅಗತ್ಯ ಇರುವ ಇತರರಿಗೆ ಅದು ಸಿಗುವುದಿಲ್ಲ ಎಂದಾದರೆ, ಈ ಕ್ರಮ ತಾರತಮ್ಯಕ್ಕೆ ಆಸ್ಪದ ಮಾಡಿಕೊಡುತ್ತದೆ. ಸಂವಿಧಾನದ ಪ್ರಕಾರ ‘ಸಮಾನರ ಮಧ್ಯೆ ಯಾವುದೇ ಕಾರಣಕ್ಕೂ ಅಸಮಾನತೆ ತೋರಬಾರದು’ ಮತ್ತು ‘ಎಲ್ಲ ಬಗೆಯ ಅವಕಾಶ ವಂಚಿತರನ್ನು ಸಮಾನರಾಗಿಯೇ ನೋಡಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ದುರ್ಬಲ ವರ್ಗದ ಎಲ್ಲ ಮಕ್ಕಳನ್ನೂ ಸರಿಸಮ ಎಂದು ಪರಿಗಣಿಸುವುದಾದರೆ ಏಕರೂಪದ ಶಿಷ್ಯವೇತನ ಯೋಜನೆಯನ್ನು ಜಾರಿಗೆ ತರುವುದು ಸೂಕ್ತ. ‘ಅನನುಕೂಲ ಇರುವ ವರ್ಗಕ್ಕೆ ಸೇರಿದ ಮಕ್ಕಳು’ ಮತ್ತು ‘ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳು’ ಎಂಬ ಶಿಕ್ಷಣ ಹಕ್ಕು ಕಾಯ್ದೆಯ (ಆರ್ಟಿಇ) ವ್ಯಾಖ್ಯಾನಕ್ಕೆ ಕೆಲ ತಿದ್ದುಪಡಿಗಳನ್ನು ಮಾಡಿಕೊಳ್ಳುವ ಮೂಲಕ ಇದಕ್ಕೆ ಬೇಕಾಗುವ ಮಾನದಂಡವನ್ನು ನಿಗದಿ ಪಡಿಸಬೇಕು. ಈ ಮೂಲಕ ಈ ಮಾನದಂಡಗಳು ಎಲ್ಲ ಅರ್ಹ ಮಕ್ಕಳಿಗೂ ಅನ್ವಯವಾಗುವಂತೆ ಇರಬೇಕೇ ಹೊರತು ಕೆಲವೇ ಮಕ್ಕಳಿಗೆ ಅಲ್ಲ.
ಪ್ರತಿ ವರ್ಷ ಬಾಲಕ ಮತ್ತು ಬಾಲಕಿಯರಿಬ್ಬರಿಗೂ ಕನಿಷ್ಠ ₨೧,೨೦೦ ಶಿಷ್ಯವೇತನವನ್ನು ನಿಗದಿಪಡಿಸಬಹುದು. ಇದರ ಜೊತೆಗೆ ₨೧೦,೦೦೦ದ ಬಾಂಡ್ ಮಾಡಿಸಬಹುದು. ಇದು ಮಕ್ಕಳು ೧೪ ಅಥವಾ ೧೮ನೇ ವರ್ಷಕ್ಕೆ ಕಾಲಿಟ್ಟಾಗ ಭಾಗ್ಯಲಕ್ಷ್ಮಿ ಯೋಜನೆಯ ಮಾದರಿಯಲ್ಲೇ ₨೧ ಲಕ್ಷ ಆಗಬೇಕು. ಇದನ್ನು ಪಡೆಯಲು ಮಗು ಕಡ್ಡಾಯವಾಗಿ 8 ವರ್ಷ ಶಾಲೆಯಲ್ಲಿ ಓದಿರಬೇಕೆಂಬ ಷರತ್ತನ್ನು ವಿಧಿಸ
ಬಹುದು. ಜೊತೆಗೆ ಎಲ್ಲ ಇಲಾಖೆಗಳು ನೀಡುವ ಶಿಷ್ಯವೇತನಕ್ಕೆ ಒಂದೇ ನಿಧಿ ಸ್ಥಾಪಿಸಿ ಹಣವನ್ನು ಎಲ್ಲ ದುರ್ಬಲ ಮಕ್ಕಳಿಗೂ ಸಮನಾಗಿ ವಿತರಿಸಬಹುದು.
Year: September, 2014
Author: Kathyayini Chamaraj
file attach: Article by kathyayini – Prajavani.docx
Published in: Prajvani